ನಮ್ಮ ಕರ್ನಾಟಕ ವೈಭವಕ್ಕೆ ಸ್ವಾಗತ, ಸುಸ್ವಾಗತ

ಕನ್ನಡ ನಾಡಿನ ಅಂದವ ನೋಡ, ಸಾಹಿತ್ಯ ಸಂಸ್ಕೃತಿಯ ಕಲೆಬೀಡ, ಕನ್ನಡ ನಾಡಿನ ಅಂದವ ಸವಿಯ ಬಾರ, ನೀ ಬಂದು ಒಮ್ಮೆ ನೋಡ ಬಾರ, -(ಮಾ.ಕೃ.ಮಂಜು) ಇದು ಕನ್ನಡ ನಾಡಿನ ದೇವಾಲಯಗಳು, ಪ್ರಸಿದ್ಧ ಸ್ಥಳಗಳನ್ನು ಪರಿಚಯಿಸುವ ತಾಣ. ಕರ್ನಾಟಕದ ವೈಭವವನ್ನು ಜಗತ್ತಿಗೆ ಪರಿಚಯಿಸುವ ಪುಟ್ಟ ಪ್ರಯತ್ನ.
ಬಂಧುಗಳೇ ನಿಮ್ಮ ಊರಿನ ಪ್ರಸಿದ್ಧವಾದ ಸ್ಥಳಗಳ, ದೇವಾಲಯಗಳ ಪೋಟೋಗಳನ್ನು/ಮಾಹಿತಿಗಳನ್ನು "ನಮ್ಮ ಕರ್ನಾಟಕ ವೈಭವ"ದಲ್ಲಿ ಮೂಡಿಬರಬೇಕೇ ಹಾಗಿದ್ದರೆ ನನಗೆ ಮೇಲ್ ಕಳುಹಿಸಿಕೊಡಿ.
ನನ್ನ ಮೇಲ್ : makrumanju@gmail.com

Wednesday, July 3, 2013

ತಾವರೆಕೆರೆಯ ವೀರಗಲ್ಲು

ತಾವರೆಕೆರೆಯ ವೀರಗಲ್ಲು

ಬೆಂಗಳೂರಿನ ಮಾಗಡಿ ರೋಡಿನಿಂದ ಹಾಗೇ ಮುಂದುವರಿದು ತಾವರೆಕೆರೆಯ ಮಾರ್ಗವಾಗಿ ಮುನ್ನೆಡೆಯುತ್ತಿದ್ದಾಗ, ಎಡಗಡೆ ಕಾಣಿಸಿದ ಹೊಲವೊಂದರಲ್ಲಿ ಅನಾಥವಾಗಿ ಬಿದ್ದಿದ್ದ ವೀರಗಲ್ಲುಗಳಿವು.

DSC00599

DSC00595

DSC00597

DSC00594

ಸ್ಥಳೀಯರ ವಿವರಣೆಯಿಂದ ಮನದಣಿಯದೆ ಚಿತ್ರ ತೆಗೆದುಕೊಂಡು ಸಂಪದದಲ್ಲಿ ಹಾಕಿದಾಗ, ಮರಿಜೋಸೆಫರು ಕೊಟ್ಟ ವಿವರಣೆ ಇಂತಿದೆ:

ಊರ ಹಿತಕ್ಕಾಗಿಯೋ ಮಾನಿನಿಯರ ರಕ್ಷಣೆಗಾಗಿಯೋ ತನ್ನ ಪಶುಗಳ ಕ್ಷೇಮಕ್ಕಾಗಿಯೋ ಹುತಾತ್ಮನಾದವನ ನೆನೆಪಿಗೆ ಸ್ಮಾರಕ ನೆಟ್ಟು ಪೂಜಿಸುವ ಕಲ್ಲೇ ವೀರಗಲ್ಲು. ಕನ್ನಡ ಸಂಸ್ಕೃತಿ ಎಲ್ಲೆಲ್ಲಿ ಪಸರಿಸಿತ್ತೋ ಅಲ್ಲೆಲ್ಲಾ ಈ ವೀರಗಲ್ಲುಗಳು ಸಾಮಾನ್ಯವಾಗಿ ಕಾಣಸಿಗುತ್ತವೆ.

ವೀರಗಲ್ಲುಗಳಲ್ಲಿ ಸಾಮಾನ್ಯವಾಗಿ ಮೂರು ಹಂತಗಳಿದ್ದು ಅತಿ ಕೆಳಗಿನದರಲ್ಲಿ ವೀರನು ಸೆಣಸುತ್ತಿರುವ ದೃಶ್ಯ, ಅದರ ಮೇಲೆ ಅವನು ಸಾಯುವಾಗ ಅಪ್ಸರೆಯರು ಬಂದು ಉಪಚರಿಸುತ್ತಿರುವ ದೃಶ್ಯ, ಎಲ್ಲಕ್ಕಿಂತ ಮೇಲಿನ ಹಂತದಲ್ಲಿ ವೀರನು ದೇವನ ಸಾನ್ನಿಧ್ಯದಲ್ಲಿ ವಿರಾಜಮಾನನಾಗಿ ದೇವಸೇವೆ ಮಾಡುವ ದೃಶ್ಯ ಕಂಡುಬರುತ್ತದೆ. ಕೆಲ ವೀರಗಲ್ಲುಗಳಲ್ಲಿ ವೀರನ ಸಾವು ಹೇಗಾಯಿತು ಎಂಬುದನ್ನು ಅರುಹುವ ಪಠ್ಯವನ್ನೂ ಕೆತ್ತಲಾಗಿರುತ್ತದೆ. ಕೆಲ ವೀರಗಲ್ಲುಗಳಲ್ಲಿ ಶಿವಲಿಂಗದ ಅಥವಾ ತೀರ್ಥಂಕರನ ಅಥವಾ ಶಂಖಚಕ್ರಗಳ ಚಿತ್ರವಿರುತ್ತದೆ. ಸೂರ್ಯ ಚಂದ್ರರ ಚಿತ್ರಗಳಿದ್ದರೆ ಆ ವೀರನ ಕೀರ್ತಿ ಆಚಂದ್ರಾರ್ಕವಾಗಿರುತ್ತದೆ ಎನ್ನುವುದನ್ನು ಸೂಚಿಸುತ್ತದೆ.

ಪಾಲಚಂದ್ರರು ತೋರಿಸಿರುವ ಚಿತ್ರದಲ್ಲಿ ವೀರನೊಬ್ಬನು ದರೋಡೆಕೋರರಿಂದ ತನ್ನ ಕುರಿಗಳನ್ನು ಕಾಪಾಡುವುದಕ್ಕಾಗಿ ಸೆಣಸುತ್ತಿದ್ದಾನೆ. ಈ ಸಂದರ್ಭದಲ್ಲಿ ಅವನು ಇಬ್ಬರು ಕಳ್ಳರನ್ನು ಕೆಳಕ್ಕೆ ಕೆಡವಿದ್ದಾನೆ. ಅವನ ಬಲಬದಿಯಲ್ಲಿ ಪ್ರಾಣಿಗಳ ಚಿತ್ರ ಇರುವುದರಿಂದ ತನ್ನ ಪ್ರಾಣಿಗಳನ್ನು ಸುರಕ್ಷಿತವಾಗಿ ಊರೆಡೆಗೆ ಕಳಿಸಿದ್ದಾನೆ ಎಂದರ್ಥ. ಅವನ ಎಡಬದಿಯಲ್ಲಿ ಪ್ರಾಣಿ ಕಂಡುಬಂದರೆ ಶತ್ರಗಳು ಅವನ್ನು ಅಪಹರಿಸಿದರು ಎಂಬುದನ್ನು ಸಂಕೇತಿಸುತ್ತದೆ. ಇಲ್ಲಿ ಆತ ತನ್ನ ಪ್ರಾಣಿಗಳನ್ನು ಉಳಿಸಿದ್ದಾನಾದರೂ ಶತ್ರಗಳ ಕೈ ಮೇಲಾಗಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ.

ಆಗ ವೀರಸ್ವರ್ಗದ ಅಪ್ಸರೆಯರು ಬಂದು ನಿನ್ನಂಥ ವೀರ ಈ ಭೂಮಿಯಲ್ಲಿರುವುದು ತರವಲ್ಲ ಬಾರೆಂದು ತಮ್ಮ ಲೋಕಕ್ಕೆ ಕರೆದೊಯ್ಯುತ್ತಾರೆ. ಮೇಲಣ ಹಂತದಲ್ಲಿ ಆತ ಅಪ್ಸರೆಯರೊಂದಿಗೆ ಲಾಸ್ಯವಾಡುತ್ತಿರುವುದನ್ನು ನೋಡಬಹುದಾಗಿದೆ.


ಪುರಾತನ ದೇವಸ್ಥಾನವನ್ನೆಲ್ಲಾ ಜೀರ್ಣೋದ್ಧಾರದ ನೆಪದಿಂದ ಅಂದಗೆಡಿಸುವ ನಾವು ಇವುಗಳ ಬಗ್ಗೆ ಅಲಕ್ಷ್ಯ ಧೋರಣೆ ಏಕೆ ತಳೆದಿದ್ದೇವೆಯೋ ತಿಳಿದಿಲ್ಲ! ಐತಿಹಾಸಿಕವಾಗಿ ಇವುಗಳ ಪ್ರಾಮುಖ್ಯತೆ ಶೂನ್ಯವೇ?

No comments:

Post a Comment