ಮೈಲಾರ ಜಾತ್ರೆಯ ಬಗ್ಗೆ ಬಹಳ ಕೇಳಿದ್ದೆ. ಲಕ್ಷಗಟ್ಟಲೆ ಜನರು ಒಟ್ಟಾಗುವ ಈ ಜಾತ್ರೆ ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲೊಂದು. ಮೈಲಾರದ ಮೈಲಾರಲಿಂಗೇಶ್ವರ ದೇವಾಲಯವನ್ನು ನೋಡಬೆಕೆನ್ನುವ ಆಸೆ ಕೊನೆಗೂ ಈಡೇರಿತು. ಆದರೆ ನಿರಾಸೆಯೂ ಆಯಿತು. ಇದೊಂದು ಪ್ರಾಚೀನ ದೇವಾಲಯವಿರಬಹುದೆಂದು ನಾನು ಊಹಿಸಿದ್ದೆ. ಆದರೆ ಇದು ಅತ್ಯಾಧುನಿಕ ದೇವಾಲಯವಾಗಿತ್ತು.
ಬಣ್ಣಬಣ್ಣದ ಅಷ್ಟೆತ್ತರದ ಸುಂದರ ಸ್ವಾಗತ ಗೋಪುರ, ಅತಿ ವಿಶಾಲ ಪ್ರಾಂಗಣ, ಚಪ್ಪಲಿ ಇಡಲು ಪ್ರತ್ಯೇಕ ಕೌಂಟರ್, ಪ್ರವೇಶ ಶುಲ್ಕ, ಗರ್ಭಗುಡಿಯ ಮೇಲೆ ಇನ್ನಷ್ಟು ಸುಂದರವಾಗಿರುವ ಬಣ್ಣಬಣ್ಣದ ಗೋಪುರ. ಎಲ್ಲೆಲ್ಲೂ ಮಾರ್ಬಲ್! ಗೋಡೆಯಲ್ಲೂ, ನೆಲದಲ್ಲೂ ಎಲ್ಲೆಲ್ಲೂ ಮಾರ್ಬಲ್. ಅಂಗಿ ಕಳಚಿ ಅಂತರಾಳದೊಳಗೆ ಪ್ರವೇಶಿಸಬೇಕೆಂಬ ನಿಯಮ. ಇಲ್ಲದಿದ್ದರೆ ಮಾರ್ಬಲ್ ಹಾಸಿ, ಹೊಳೆಯುವಂತೆ ಮಾಡಲಾಗಿದ್ದ ನವರಂಗದಲ್ಲೇ ನಿಂತು ಮೈಲಾರಲಿಂಗೇಶ್ವರನ ದರ್ಶನ ಮಾಡಿ ತೃಪ್ತಿಪಟ್ಟುಕೊಳ್ಳಬೇಕು.
ದೇವಾಲಯದ ಹೊರಗೆ ಮಹಿಳೆಯೊಬ್ಬಳು ಮೈಲಾರಲಿಂಗೇಶ್ವರನಿಗೆ ಸಾಷ್ಟಾಂಗ ನಮಸ್ಕಾರ ಸೇವೆ ಮಾಡುತ್ತಿದ್ದಳು. ದೇವಾಲಯದ ಸುತ್ತಲೂ ಹಾಸಿರುವ ಚಪ್ಪಡಿಕಲ್ಲಿನ ಮೇಲೆ ಉರಿಬಿಸಿಲಿನಲ್ಲಿ ಈಕೆಯ ದೇಹ ದಂಡಿಸಿಕೊಳ್ಳುವ ಸೇವೆ ನೋಡಿ ದಂಗಾದೆ. ಸಾಷ್ಟಾಂಗ ನಮಸ್ಕಾರ ಮಾಡುವುದು, ನಂತರ ಎದ್ದು ೫ ಹೆಜ್ಜೆ ನಡೆದು ಮತ್ತೆ ಸಾಷ್ಟಾಂಗ ನಮಸ್ಕಾರ! ನಾವು ದೇವಾಲಯವನ್ನು ಸಂಪೂರ್ಣವಾಗಿ ನೋಡಿ ಮುಗಿಸಿದರೂ ಈಕೆ ೨ ಸುತ್ತು ಮಾತ್ರ ಮುಗಿಸಿದ್ದಳು. ಎಷ್ಟು ಸುತ್ತುಗಳ ಸೇವೆಯಿತ್ತೇನೋ. ಅಬ್ಬಾ ಭಕ್ತಿಯೇ!
ದೇವಾಲಯದ ಆಧುನಿಕತೆ ನೋಡಿ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿರುವ ದೇವಾಲಯ ಇದಾಗಿರಲಾರದು ಎಂಬ ಸಂಶಯ ಬರಲಾರಂಭಿಸಿತು. ಈ ದೇವಸ್ಥಾನದಿಂದ ಅನತಿ ದೂರದಲ್ಲಿ ಸಂಪೂರ್ಣವಾಗಿ ಪಾಳುಬಿದ್ದಿರುವ ತುಂಬಾ ಸಣ್ಣ ದೇವಾಲಯವೊಂದಕ್ಕೆ ಬೇಲಿ ಹಾಕಲಾಗಿತ್ತು. ಅಲ್ಲೇ ಪುರಾತತ್ವ ಇಲಾಖೆಯ ನೀಲಿ ಮತ್ತು ಕೆಂಪು ಬಣ್ಣದ ಫಲಕ! ಹೊರಗಿನಿಂದ ನೋಡಿದರೆ ಎಲ್ಲರೂ ನಿರ್ಲಕ್ಷಿಸಲೇಬೇಕಾದ ದೇವಸ್ಥಾನ. ಇದೇ ಪುರಾತತ್ವ ಇಲಾಖೆ ಮೈಲಾರದಲ್ಲಿ ತನ್ನ ಸುಪರ್ದಿಗೆ ಪಡೆದಿರುವ ಹಳೇ ಮೈಲಾರಲಿಂಗೇಶ್ವರ ದೇವಾಲಯ. ಒಳಗೆಲ್ಲಾ ಕಸಕಡ್ಡಿಗಳ ರಾಶಿ. ಗರ್ಭಗುಡಿಯಲ್ಲಿ ಪಾಣಿಪೀಠ ರಹಿತ ಶಿವಲಿಂಗ, ಅಂತರಾಳ ಮತ್ತು ನವರಂಗ.
ಆದರೆ ಈ ದೇವಾಲಯದಲ್ಲೊಂದು ನನ್ನನ್ನು ಬಹಳ ಗಲಿಬಿಲಿ ಮಾಡಿದ ವೈಶಿಷ್ಟ್ಯತೆಯಿತ್ತು. ಅದೆಂದರೆ ೨ ನಂದಿಗಳು. ಇದರಲ್ಲೇನೂ ದೊಡ್ಡ ವಿಷಯ ಎಂದಿರಾ? ಒಂದು ನಂದಿ ಅಂತರಾಳದಲ್ಲಿದ್ದರೆ ಇನ್ನೊಂದು ನವರಂಗದಲ್ಲಿದೆ. ನವರಂಗದಲ್ಲಿರುವ ನಂದಿ ಗರ್ಭಗುಡಿಗೆ ಮುಖ ಮಾಡಿ ಇದೆ. ಆದರೆ ಅಂತರಾಳದಲ್ಲಿರುವ ನಂದಿ ಗರ್ಭಗುಡಿಗೆ ಬೆನ್ನು ಮಾಡಿ ಆಸೀನನಾಗಿದೆ!!! ಇದೇ ವಿಶೇಷ. ನಂದಿ ಎಂದಾದರೂ ತನ್ನ ಸ್ವಾಮಿ ಶಿವನಿಗೆ ಬೆನ್ನು ಮಾಡಿ ಕೂತಿರುವುದನ್ನು ಕಂಡಿದ್ದೀರಾ? ಆದರೆ ಇಲ್ಲಿ ಹಾಗಿತ್ತು.
ಕೃಪೆ : ರಾಜೇಶ್ ನಾಯ್ಕ್










