ನಮ್ಮ ಕರ್ನಾಟಕ ವೈಭವಕ್ಕೆ ಸ್ವಾಗತ, ಸುಸ್ವಾಗತ

ಕನ್ನಡ ನಾಡಿನ ಅಂದವ ನೋಡ, ಸಾಹಿತ್ಯ ಸಂಸ್ಕೃತಿಯ ಕಲೆಬೀಡ, ಕನ್ನಡ ನಾಡಿನ ಅಂದವ ಸವಿಯ ಬಾರ, ನೀ ಬಂದು ಒಮ್ಮೆ ನೋಡ ಬಾರ, -(ಮಾ.ಕೃ.ಮಂಜು) ಇದು ಕನ್ನಡ ನಾಡಿನ ದೇವಾಲಯಗಳು, ಪ್ರಸಿದ್ಧ ಸ್ಥಳಗಳನ್ನು ಪರಿಚಯಿಸುವ ತಾಣ. ಕರ್ನಾಟಕದ ವೈಭವವನ್ನು ಜಗತ್ತಿಗೆ ಪರಿಚಯಿಸುವ ಪುಟ್ಟ ಪ್ರಯತ್ನ.
ಬಂಧುಗಳೇ ನಿಮ್ಮ ಊರಿನ ಪ್ರಸಿದ್ಧವಾದ ಸ್ಥಳಗಳ, ದೇವಾಲಯಗಳ ಪೋಟೋಗಳನ್ನು/ಮಾಹಿತಿಗಳನ್ನು "ನಮ್ಮ ಕರ್ನಾಟಕ ವೈಭವ"ದಲ್ಲಿ ಮೂಡಿಬರಬೇಕೇ ಹಾಗಿದ್ದರೆ ನನಗೆ ಮೇಲ್ ಕಳುಹಿಸಿಕೊಡಿ.
ನನ್ನ ಮೇಲ್ : makrumanju@gmail.com

Friday, June 3, 2011

ಲಕ್ಷ್ಮೀನರಸಿಂಹ ದೇವಾಲಯ - ಭದ್ರಾವತಿ


ಲಕ್ಷ್ಮೀನರಸಿಂಹ ದೇವಾಲಯ - ಭದ್ರಾವತಿ, ಶಿವಮೊಗ್ಗ ಜಿಲ್ಲೆ


ಪೂಜಿತ ದೇವರ ಸುಂದರ ಮೂರ್ತಿಗಳನ್ನು ನೋಡಬೇಕಾದರೆ ಭದ್ರಾವತಿಯ ಲಕ್ಷ್ಮೀನರಸಿಂಹ ದೇವಾಲಯಕ್ಕೆ ಭೇಟಿ ನೀಡಬೇಕು. ಇಲ್ಲಿ ಅದ್ಭುತವಾಗಿ ಕೆತ್ತಲಾಗಿರುವ ೫ ಮೂರ್ತಿಗಳಿವೆ - ಲಕ್ಷ್ಮೀನರಸಿಂಹ, ವೇಣುಗೋಪಾಲ, ಪುರುಷೋತ್ತಮ, ಗಣೇಶ ಮತ್ತು ಶಾರದಾ. ಈ ಮೂರ್ತಿಗಳನ್ನು ಕೆತ್ತಿದ ಶಿಲ್ಪಿ ಡಕ್ಕಣಾಚಾರಿ.


ದೇವಾಲಯದೊಳಗೆ ಚಿತ್ರ ತೆಗೆಯುವುದನ್ನು ನಿಷೇಧಿಸಲಾಗಿದ್ದರೂ ಈ ಮೂರ್ತಿಗಳ ಅದ್ಭುತ ಕೆತ್ತನೆಯನ್ನು ಕಂಡು ಹೇಗಾದರೂ ಮಾಡಿ ಚಿತ್ರ ತೆಗೆದೇ ಅಲ್ಲಿಂದ ಹೊರಹೋಗುವುದು ಎಂದು ನಿರ್ಧರಿಸಿದೆ. ಆಗ ನನ್ನ ಮನಸ್ಸನ್ನು ಓದಿದವರಂತೆ ಅಲ್ಲಿನ ಅರ್ಚಕರು ’ದೇವರ ಚಿತ್ರಗಳನ್ನು ತೆಗೆದರೆ ಕೆಡುಕುಂಟಾಗುತ್ತದೆ. ಚಿತ್ರ ತೆಗೆದ ಎಷ್ಟೋ ಜನರಿಗೆ ಅಪಾರ ಹಾನಿಯುಂಟಾಗಿದೆ’ ಎಂದುಬಿಟ್ಟರು.


ತ್ರಿಕೂಟ ಶೈಲಿಯಲ್ಲಿರುವ ದೇವಾಲಯವು ಮೂರ್ನಾಲ್ಕು ಅಡಿ ಎತ್ತರದ ಜಗತಿಯ ಮೇಲೆ ನಿರ್ಮಾಣಗೊಂಡಿದೆ. ಎರಡು ಕಂಬಗಳ ಸುಂದರ ಮುಖಮಂಟಪವಿದ್ದು ಇಕ್ಕೆಲಗಳಲ್ಲಿ ಕಲ್ಲಿನ ಆಸನಗಳಿವೆ. ದೇವಾಲಯದೊಳಗೆ ಕಾಲಿಟ್ಟರೆ ಸುಖನಾಸಿ ಮತ್ತು ನಂತರ ನವರಂಗ. ನಾಲ್ಕು ಕಂಬಗಳನ್ನು ಹೊಂದಿರುವ ನವರಂಗದಿಂದಲೇ ಎಲ್ಲಾ ದೇವರ ಮೂರ್ತಿಗಳನ್ನು ವೀಕ್ಷಿಸಬೇಕು. ಮೂರೂ ಗರ್ಭಗುಡಿಗಳು ಪ್ರತ್ಯೇಕ ಅಂತರಾಳವನ್ನು ಹೊಂದಿದ್ದು, ಅಂತರಾಳಗಳ ದ್ವಾರಗಳೂ ಏಕಪ್ರಕಾರವಾಗಿದ್ದು ಸುಂದರ ಜಾಲಂಧ್ರಗಳನ್ನು ಹೊಂದಿವೆ.


ಪ್ರಮುಖ ಗರ್ಭಗುಡಿಯಲ್ಲಿ ಸುಖಾಸನ ಶೈಲಿಯಲ್ಲಿ ಲಕ್ಷ್ಮೀನರಸಿಂಹ ವಿರಾಜಮಾನನಾಗಿದ್ದಾನೆ. ದಕ್ಷಿಣದಲ್ಲಿರುವ ಗರ್ಭಗುಡಿಯಲ್ಲಿ ಗರುಡ ಪೀಠದ ಮೇಲೆ ವೇಣುಗೋಪಾಲನ ಮನಮೋಹಕ ಮೂರ್ತಿಯಿದೆ. ಮರವೊಂದರ ಕೆಳಗೆ ಕೊಳಲು ನುಡಿಸುತ್ತಿರುವ ಭಂಗಿಯಲ್ಲಿ ವೇಣುಗೋಪಾಲನ ಮೂರ್ತಿಯನ್ನು ಕೆತ್ತಲಾಗಿದ್ದು, ಒಂದು ಬದಿಯಲ್ಲಿ ಗೋಪಿಕಾ ಸ್ತ್ರೀಯರು ಮತ್ತು ಗೋವುಗಳು ಹಾಗೂ ಇನ್ನೊಂದು ಬದಿಯಲ್ಲಿ ಗೋಪಾಲರು ಮತ್ತು ಗೋವುಗಳು ಕೊಳಲಿನಿಂದ ಹೊರಹೊಮ್ಮುತ್ತಿರುವ ಸಂಗೀತವನ್ನು ಮೈಮರೆತು ಕೇಳುತ್ತಿರುವುದನ್ನು ಮನೋಜ್ಞವಾಗಿ ಕೆತ್ತಲಾಗಿದೆ. ಉತ್ತರ ದಿಕ್ಕಿನಲ್ಲಿರುವ ಗರ್ಭಗುಡಿಯಲ್ಲಿ ಗರುಡ ಪೀಠದ ಮೇಲೆ ಪುರುಷೋತ್ತಮ ಮೂರ್ತಿಯಿದೆ. ವಿಷ್ಣುವನ್ನು ’ಪುರುಷೋತ್ತಮ’ ರೂಪದಲ್ಲಿ ತೋರಿಸಿರುವ ನಿದರ್ಶನಗಳು ಬಹಳ ವಿರಳ.


ಪ್ರಮುಖ ಗರ್ಭಗುಡಿಯ ಅಂತರಾಳದ ದ್ವಾರದ ಇಕ್ಕೆಲಗಳಲ್ಲಿರುವ ಕವಾಟಗಳಲ್ಲಿ ಗಣೇಶ ಮತ್ತು ಶಾರದಾದೇವಿಯ ಆಕರ್ಷಕ ಮೂರ್ತಿಗಳಿವೆ. ಈ ಐದೂ ಮೂರ್ತಿಗಳ ಚಿತ್ರ ತೆಗೆಯಲು ಆಗುತ್ತಿಲ್ಲವಲ್ಲ ಎಂದು ಬಹಳ ಚಡಪಡಿಸಿದೆ. ದೇವಾಲಯದ ನವರಂಗದಲ್ಲೇ ಬಹಳ ಸಮಯ ಕಳೆದು ಎಲ್ಲಾ ಮೂರ್ತಿಗಳನ್ನು ಕಣ್ತುಂಬಾ ನೋಡಿದೆ.


ಇಲ್ಲಿರುವ ಅರ್ಚಕರು ದೇವಾಲಯದ ಬಗ್ಗೆ ಮಾಹಿತಿ ನೀಡಿದರು. ನಾಲ್ಕು ತಲೆಮಾರುಗಳಿಂದ ಅವರ ಮನೆಯವರೇ ಇಲ್ಲಿ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.  ದೇವಾಲಯದ ಮುಖ್ಯ ದ್ವಾರದ ಹೊರಗೆ ನಿಂತವರಿಗೆ, ಲಕ್ಷ್ಮೀನರಸಿಂಹನ ಕಾಲುಗಳು ತಮ್ಮ ತಲೆಯ ಮೇಲೆ ಇರುವಂತೆ ಮತ್ತು ನವರಂಗದಲ್ಲಿ ಕುಳಿತರೆ ವೇಣುಗೋಪಾಲನ ಮತ್ತು ಪುರುಷೋತ್ತಮನ ಕಾಲುಗಳು ತಲೆಯ ಮೇಲೆ ಇರುವಂತೆ ಭಾಸವಾಗುವ ರೀತಿಯಲ್ಲಿ ಈ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಎಲ್ಲಾ ಹೊಯ್ಸಳ ದೇವಾಲಯಗಳಲ್ಲೂ ಇದೇ ರೀತಿ ಇರುತ್ತದೆಯಂತೆ! ಮೇ ತಿಂಗಳಲ್ಲಿ ದೇವಾಲಯದ ವಾರ್ಷಿಕ ಜಾತ್ರೆ ನಡೆಯುತ್ತದೆ ಎಂದು ಅವರು ತಿಳಿಸಿದರು.


ದೇವಾಲಯದ ಹೊರಗೋಡೆಯಲ್ಲಿ ತುಂಬಾ ಭಿತ್ತಿಗಳಿದ್ದರೂ ಯಾವುದೂ ಆಕರ್ಷಕವಾಗಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ ಅವುಗಳ ಅಪೂರ್ಣ ಕೆತ್ತನೆ. ಎಲ್ಲಾ ಭಿತ್ತಿಚಿತ್ರಗಳನ್ನು ಕೊನೆಯ ಹಂತದವರೆಗೆ ಕೆತ್ತಲಾಗಿದ್ದು, ನೈಜ ರೂಪ ನೀಡುವ ಅಂತಿಮ ಹಂತ ಬಂದಾಗ ಕೆತ್ತನೆ ನಿಲ್ಲಿಸಿದಂತೆ ಕಾಣಬರುತ್ತದೆ. ಕೆಲವು ಭಿತ್ತಿಗಳ ಪೀಠಭಾಗದಲ್ಲಿ ಒಂದು ಅಕ್ಷರವನ್ನು ಕೆತ್ತಿರುವುದು ಕಂಡುಬರುತ್ತದೆ. ಶಿಲ್ಪಿಯ ಹೆಸರಿನ ಮೊದಲ ಅಕ್ಷರವಿರಬಹುದೇ?


ದೇವಾಲಯದ ದಕ್ಷಿಣ ಭಾಗದಲ್ಲಂತೂ ಭಿತ್ತಿಗಳನ್ನು ಕೆತ್ತಲು ಚೌಕಟ್ಟನ್ನು ಅಂತಿಮಗೊಳಿಸಿ ಹಾಗೇ ಬಿಡಲಾಗಿದೆ. ಹೊರಗೋಡೆಯ ತಳಭಾಗದಲ್ಲಿ ಆರು ಪಟ್ಟಿಕೆಗಳೇನೋ ಇವೆ ಆದರೆ ಅವುಗಳಲ್ಲಿ ಯಾವ ಕೆತ್ತನೆಗಳೂ ಇಲ್ಲ.


ಶಿಖರಗಳ ರಚನೆಯೂ ಅಪೂರ್ಣವಾಗಿದೆ. ಮೂರು ತಾಳಗಳನ್ನು ನಿರ್ಮಿಸಿ ಅಷ್ಟಕ್ಕೇ ಕೈಬಿಟ್ಟಂತೆ ತೋರುತ್ತದೆ. ತಾಳಗಳ ಬಳಿಕ ಇರುವ ತಲೆಕೆಳಗಾಗಿರುವ ಪದ್ಮದ ಸುಳಿವು ಮೂರೂ ಶಿಖರಗಳಲ್ಲಿಲ್ಲ. ಅವಸರದಲ್ಲಿ ಗುಮ್ಮಟದಂತಹ ರಚನೆ ಮಾಡಿ ಶಿಖರದ ಮೇಲ್ಭಾಗವನ್ನು ಮುಚ್ಚಿರುವುದು ಕಾಣಬರುತ್ತದೆ. ದೇವಾಲಯವನ್ನು ವೀಕ್ಷಿಸಿದಾಗ ವಿಚಿತ್ರವಾಗಿರುವ ಶಿಖರದ ತುದಿಭಾಗಗಳೇ ಎದ್ದುಕಾಣುತ್ತವೆ.


ದೇವಾಲಯದ ಹೊರಗೋಡೆಯ ಮೇಲಿನ ಸಾಲಿನಲ್ಲಿರುವ ಸಣ್ಣ ಸಣ್ಣ ಗೋಪುರಗಳನ್ನು ಮಾತ್ರ ಸರಿಯಾಗಿ ಕೆತ್ತಲಾಗಿದೆ. ಭಿತ್ತಿಚಿತ್ರಗಳ ಕೆತ್ತನೆಯನ್ನು ಪೂರ್ಣಗೊಳಿಸಿದ್ದಲ್ಲಿ ಅವುಗಳು ಅದ್ಭುತ ಕಲಾಕೃತಿಗಳಾಗುತ್ತಿದ್ದವು.


೧೩ನೇ ಶತಮಾನದ ಮಧ್ಯಭಾಗದಲ್ಲಿ ಈ ದೇವಾಲಯದ ನಿರ್ಮಾಣವಾಗಿದೆ ಎನ್ನಲಾಗುತ್ತದೆ. ಈ ಬಗ್ಗೆ ಸ್ಪಷ್ಟ ದಾಖಲೆಗಳಿಲ್ಲ. ಇನ್ನೊಂದು ಅಭಿಪ್ರಾಯವೇನೆಂದರೆ ಪುರಾತನ ಕಾಲದಿಂದಲೂ ಇದ್ದ ದೇವಾಲಯದಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಹೊಯ್ಸಳರು ಅಭಿವೃದ್ಧಿಪಡಿಸಿದರು ಎಂದು. ಭದ್ರಾವತಿಯನ್ನು ಮೊದಲು ವಂಕಿಪುರ ಮತ್ತು ನಂತರ ಬೆಂಕಿಪುರವೆಂದು ಕರೆಯಲಾಗುತ್ತಿತ್ತು. ಮಹಾಭಾರತದಲ್ಲಿ ಈ ದೇವಾಲಯದ ಬಗ್ಗೆ ವಂಕಿಪುರದ ದೇವಾಲಯವೆಂದು ಉಲ್ಲೇಖವಿದ್ದು, ಈ ದೇವಾಲಯ ಮೊದಲಿನಿಂದಲೂ ಅಸ್ತಿತ್ವದಲ್ಲಿದ್ದ ವಾದಕ್ಕೆ ಪುಷ್ಟಿ ನೀಡುತ್ತದೆ ಎಂಬ ವಾದವೂ ಇದೆ. ಅದೇನೇ ಇರಲಿ. ಅದ್ಭುತವಾಗಿರುವ ಐದು ಮೂರ್ತಿಗಳನ್ನು ನೋಡುವ ಸಲುವಾಗಿಯಾದರೂ ಇಲ್ಲಿಗೆ ಭೇಟಿ ನೀಡಲೇಬೇಕು.

ಕೃಪೆ : ರಾಜೇಶ್ ನಾಯ್ಕ್

No comments:

Post a Comment